Tuesday, 29 March 2016

ನಿ(ನ್ಯಾರೆ)ಯಾರೆ:-

ಪ್ರತಿನಿತ್ಯ ಬರುವವಳು ಬಂದೆನ್ನ ಕಾಡೊಳು
ಕಣ್ಬಿಟ್ಟರೆ ಮರೆಯಾಗೊ ಮಿಂಚುಳ್ಳಿ ನಿನ್ಯಾರೆ
ನೀರಂತ ಗುಣದೊಳು ತನುಮನವ ಕುಣಿಸೊಳು
ಹಾಲ್ನಗೆಯ ಚೆಲ್ಲೊ ಚಂದುಳ್ಳಿ ನಿನ್ಯಾರೆ
ಇಬ್ಬನಿಯ ತಂಪಿವಳು ಸಂಪಿಗೆಯ ಕಂಪಿವಳು
ನೀರಲೆಗೆ ನಗು ಸಾಲ ಕೊಡುವ ನೀರೆ ನಿನ್ಯಾರೆ
ಹಾಲ್ಗಡಲ ನಗೆಯೊಳು ಸಿಹಿ ಮುತ್ತು ನೀಡೊಳು
ಜೇನಿನ ಹೊಳೆಗೊಡತಿ ನನ್ನೊಲವೆ ನಿನ್ಯಾರೆ
ಹೊತ್ತಿಲ್ಲದೆ ಸುಳಿಯೊಳು ಗೊತ್ತಿಲ್ಲದೆ ಮನ ಮರೆಸೊಳು
ಎತ್ತಿನ ಗಂಟೆ ನಾದದಕ್ಕೆ ನಡೆವ ವಯ್ಯಾರಿ ನಿನ್ಯಾರೆ

- ಮುಕಮಾಸು

ಜೀವನ:-

ಮಾತು ಮುತ್ತಿನಂತೆ ಸೂಕ್ಷ್ಮ, ಕಾನೂನು ಕಲ್ಲಿನಂತೆ ಕಠೋರ
ಪ್ರೀತಿ ಮತ್ತಿನ ಅಮಲು, ಯಮಾರಿದ್ರೆ ಎಳ್ಳು ನೀರಿನ ಮಜಲು
ಆಸೆ ಆಕಾಶದಷ್ಟು ವಿಶಾಲ, ಆಯಸ್ಸು ದೇವರ ಚಿತ್ತ ಚಂಚಲ

- ಮುಕಮಾಸು

Monday, 28 March 2016

ಜೀವನ :-

ತಂಗಾಳಿಯ ಜೋತೆ ತುಂತುರು ಚಲ್ಲುವ ಚಲಿಸುವ ಮೋಡ, ಮನಸ್ಸು ನಮ್ಮ ಹಿಡಿತದಲ್ಲಿದ್ದರೆ
ನಡುಹಗಲಿನ ಸುಡುಭಾನಿಗೆ ಉರಿಬೆಂಕಿಯ ಬಿಸಿಗಾಳಿಯ ಹಾಡು, ನಾವು ಮನಸ್ಸಿನ ಹಿಡಿತದಲ್ಲಿದ್ದರೆ.

- ಮುಕಮಾಸು

Tuesday, 22 March 2016

ನಿನ್ಯಾರೆ:-

ಬೆಟ್ಟದಿಂದ ಉಕ್ಕಿ ಹರಿವ ಹಾಲ್ನೊರೆಯ ಝರಿಯು ನಿಂತು ಕೇಳುತಿದೆ, ಚಲುವ ನೀರೆ ನಿನ್ಯಾರೆ
ಗೂಡು ಬಿಟ್ಟು ಹೊರಟ ಹಕ್ಕಿ ರೆಕ್ಕೆಗಳ ಏರಿಳಿತವ ನಿಲ್ಲಿಸಿ ಕೇಳಿಹುದು, ಗಾಳಿಗಿಂತ ಕೋಮಲೆ ನಿನ್ಯಾರೆ
ಪಂಜು ಹಿಡಿದು ಮುಂಜಾನೆಯ ಸೂರ್ಯ ಕೇಳುತಿಹನು, ಸುರಿವ ಮಂಜಿಗಿಂತ ಸೊಗಸಿನ ನಂಜಿ ನಿನ್ಯಾರೆ
ಕಡುಗಪ್ಪು ಕಾನನದಲಿ ಕಾಜಾಣ ಮುಕಾಗಿ ಕೇಳುತಿದೆ, ಮೆಲು ದನಿಯ ಮನಸೆ ನಿನ್ಯಾರೆ
ಮನಸು ಮುದ್ದಾಗಿ ಕೇಳುತಿದೆ ನಿ ಬಂದು ಸೇರು ನನ್ನೊಲವ ಸೂರ ಮನಸಾರೆ.

- ಮುಕಮಾಸು

Wednesday, 16 March 2016

ಪ್ರೇಮ ಕವನ :-

ಬಾ ಒಲವೆ ಬಳಿಗೆ, ಇಳಿ ಸಂಜೆಯ ಸೂರ್ಯ ಇಳಿದು ಬಂದಂತೆ ಇಳೆಗೆ ಹಾಡುತ ಗೋಧೂಳಿ ರಾಗ
ಶ್ರುಂಗಾರ ಮಜಲಿನ ರೋಮಾಂಚನ ರಾಗಕೆ, ಕರಗಿ ಪನ್ನೀರಾಗಿ ಹರಿದಂತೆ ತುಂಬು ಗರ್ಭಿಣಿ ಮೇಘ.

ಪ್ರೇಮದ ಸುಧೆ ಬಡಿಸು, ಮೂಡಣ ತಿಳಿ ಸೂರ್ಯನ ರಶ್ಮಿ ಬರೆದಂತೆ ಕಡಲಲೆಗಳ ಮೇಲೆ ಹೊಂಬೆಳಕ ಕವನ
ಅದಂತೆ ಕಡುಗೆಂಪು ನಿನ್ನ ಕೆನ್ನೆ, ಆದಾಗ ಅಗಾಧ ನನ್ನೊಲವ ಸೌಂದರ್ಯ ಜನನ.

- ಮುಕಮಾಸು